ಶೇಷನ್, ಟಿ ಎನ್
	1932-. ಮ್ಯಾಗ್ಸೇಸೆ ಪ್ರಶಸ್ತಿ ಪಡೆದ ಭಾರತದ ಮಾಜಿ ಚುನಾವಣಾ ಆಯುಕ್ತರು (1990-96). ಇವರ ಪೂರ್ಣ ಹೆಸರು ತಿರುನೆಲೈ ನಾರಾಯಣ ಅಯ್ಯರ್ ಶೇಷನ್. 1932ರಲ್ಲಿ ಕೇರಳದ ಪಾಲ್ಘಾಟ್‍ನಲ್ಲಿ ಜನಿಸಿದರು. ಮದರಾಸು ವಿಶ್ವವಿದ್ಯಾಲಯ ದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತ ಕೋತ್ತರ ಪದವಿ ಪಡೆದು, ಅನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಾರ್ವ ಜನಿಕ ಆಡಳಿತದಲ್ಲಿ ಸ್ನಾತ ಕೋತ್ತರ ಪದವಿ ಪಡೆದರು. ಭಾರತಕ್ಕೆ ಮರಳಿದ ಇವರು ಐ.ಎ.ಎಸ್. ಅಧಿಕಾರಿಯಾಗಿ ಸೇವೆ ಆರಂಭಿಸಿದರು. ಇವರು ಉತ್ತಮ ಹಾಗೂ ದಕ್ಷ ಅಧಿಕಾರಿಯಾಗಿದ್ದರು. ಮಾಜಿ ಪ್ರಧಾನಿ ರಾಜೀವ್‍ಗಾಂಧೀಯವರ ಸರ್ಕಾರದಲ್ಲಿ ಸಂಪುಟ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದರು (1989). ಇವರು ಹಲವು ಉನ್ನತ ಜವಾಬ್ದಾರಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕವಾದರು (1990). ತರುವಾಯ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು (1998).

	ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಚುನಾವಣಾ ವ್ಯವಸ್ಥೆಯು ಅನೇಕ ಸಮಸ್ಯೆಗಳಿಂದಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಇವರು ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲೇ ದೇಶದ ಚುನಾವಣಾ ವ್ಯವಸ್ಥೆಯನ್ನು ವಿಶ್ಲೇಷಿಸಿ, ಅದರಲ್ಲಿದ್ದ ನೂರಾರು ದೋಷಗಳನ್ನು ಗುರುತಿಸಿದರು. ಇವುಗಳ ನಿವಾರಣೆಗೆ ಶಾಸನಾತ್ಮಕ ಸುಧಾರಣೆಗಳನ್ನು ತರಲು ಖಚಿತವಾಗಿ ಪ್ರಯತ್ನಿಸಿದರು. ಚುನಾವಣಾ ಆಯೋಗಕ್ಕಿರುವ ಸಂವಿಧಾನದತ್ತ ಅಧಿಕಾರವನ್ನು ಬಳಸಿ ಚುನಾವಣಾ ಸಮಸ್ಯೆಗಳನ್ನು ಹಂತಹಂತವಾಗಿ ತೊಡೆದು ಹಾಕತೊಡಗಿದರು.

	ಕೇಂದ್ರ ಪೊಲೀಸ್ ಪಡೆಯನ್ನು ಬಳಸಿ ಮತಗಟ್ಟೆ ವಶದಂತಹ ಕೃತ್ಯಗಳನ್ನು ತಡೆಗಟ್ಟಿದರು. ಚುನಾವಣೆಯಲ್ಲಿ ಮತಕೊಂಡು ಕೊಳ್ಳುವಿಕೆ ಯನ್ನು ತಪ್ಪಿಸಲು ಸೂಕ್ತಕ್ರಮಗಳನ್ನು ಕೈಗೊಂಡರು. ಆಡಂಬರ ಹಾಗೂ ಗದ್ದಲದ ಚುನಾವಣಾ ಪ್ರಚಾರವನ್ನು ನಿಯಂತ್ರಿಸಲು ಕ್ರಮ ತೆಗೆದು ಕೊಂಡರು. ಬರೆಹಗಳು, ಘೋಷಣೆಗಳನ್ನು ಬರೆದು, ಭಿತ್ತಿ ಪತ್ರಗಳನ್ನು ಅಂಟಿಸಿ-ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳನ್ನು ಹಾಳುಮಾಡುವ ಸ್ಪರ್ಧಿಗಳಿಗೆ ಚುನಾವಣೆಯ ಅನಂತರ ಅವುಗಳನ್ನು ಸ್ವಚ್ಛಗೊಳಿಸಲು ಆದೇಶಿಸಿದರು. ಚುನಾವಣಾ ಸಮಯದಲ್ಲಿ ಸ್ಪರ್ಧಿಗಳು ಮಾಡುವ ವೆಚ್ಚದ ಮೇಲೆ ನಿಯಂತ್ರಣ ವಿಧಿಸಿದರು. ಚುನಾವಣಾ ವೆಚ್ಚದ ಸಂಪೂರ್ಣ ವಿವರವನ್ನು ಸರ್ಕಾರದ ತನಿಖಾಧಿಕಾರಿಗಳಿಗೆ ಕಡ್ಡಾಯವಾಗಿ ಒಪ್ಪಿಸಬೇಕೆಂದು ಆದೇಶಿಸಿದರು. ಸಾರ್ವಜನಿಕ ಸಂಪನ್ಮೂಲಗಳು ಹಾಗೂ ಸರ್ಕಾರಿ ಯಂತ್ರವನ್ನು ರಾಜಕಾರಣಿಗಳು ಕಾನೂನು ಬಾಹಿರವಾಗಿ ಉಪಯೋಗಿಸಿ ಕೊಳ್ಳುವುದನ್ನು ತಡೆಗಟ್ಟಿದರು. ಚುನಾವಣಾ ಸಮಯದಲ್ಲಿ ಸರ್ಕಾರ ತನ್ನ ನೌಕರರಿಗೆ ಯಾವುದೇ ಸವಲತ್ತು ಘೋಷಿಸುವುದನ್ನು ನಿಷೇಧಿಸಿದರು. ಚುನಾವಣಾ ಸಮಯದಲ್ಲಿ ಸಾರಾಯಿ ಮಾರಾಟವನ್ನು ರದ್ದುಗೊಳಿಸಿದರು. ಅಕ್ರಮ ಬಂದೂಕುಗಳನ್ನು ಮುಟ್ಟುಗೋಲು ಹಾಕಿಕೊಂಡರು. ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿ ಮತದಾರನಿಗೂ ಗುರುತಿನ ಚೀಟಿ ಹಂಚಿ, ಮತದಾನದ ಸಂದರ್ಭದಲ್ಲಿ ಇದನ್ನು ಹಾಜರು ಪಡಿಸುವುದನ್ನು ಕಡ್ಡಾಯಗೊಳಿಸುವುದರ ಮೂಲಕ ಖೊಟ್ಟಿ (ಪ್ರಾಕ್ಸಿ) ಮತದಾನವನ್ನು ತಡೆಗಟ್ಟಿದರು. ಮತದಾರರ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಲು ವಿಶೇಷ ಪ್ರಚಾರ ಕೈಗೊಂಡರು. ಹೀಗೆ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಒಂದು ಬಗೆಯ ಕ್ರಾಂತಿಯನ್ನೇ ಮಾಡಿದರೆನ್ನಬಹುದು.

	ಇವರು ಅನೇಕ ಬಗೆಯ ಟೀಕೆ ವಿಮರ್ಶೆಗಳಿಗೆ ಒಳಗಾಗಿದ್ದೂ ಉಂಟು. ಇವರನ್ನು ಗರ್ವಿ ಹಾಗೂ ಒರಟ ಎಂದು ಕೆಲವರು ಜರಿದರೆ, ಇನ್ನು ಕೆಲವರು ಭಾರತದ ಪ್ರಜಾಪ್ರಭುತ್ವದ ಉಕ್ಕಿನ ಮನುಷ್ಯ (ದಿ ಐರನ್ ಮ್ಯಾನ್ ಆಫ್ ಇಂಡಿಯನ್ ಡೆಮಾಕ್ರಸಿ) ಎಂದು ಹೊಗಳಿದರು. ಇವರ ಕ್ರಾಂತಿಕಾರಿ ಪ್ರಯತ್ನಗಳಿಂದಾಗಿ ಭಾರತದ ಚುನಾವಣಾ ರೀತಿ ನೀತಿ ಕೊಂಚಮಟ್ಟಿಗೆ ಸುಧಾರಣೆಯನ್ನು ಕಂಡಿತು. ಹಲವು ರಾಷ್ಟ್ರಗಳು ಶೇಷನ್ ಮಾದರಿಯನ್ನು ಅನುಸರಿಸುವಂತಾಯಿತು.

	ಇವರು ಸಲ್ಲಿಸಿದ ಸೇವೆಗಾಗಿ ರ್ಯಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭಿಸಿದೆ (1996). ಈಗ ಇವರು ಚೆನ್ನೈನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದು ಸಾಮಾಜಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರು ಬರೆಹಗಾರರೂ ಆಗಿದ್ದು ಮೈ ಬರ್ಡ್‍ನ್ಡ್ ಹಾರ್ಟ್ ಎಂಬ ಅನುಭವ ಕಥನವನ್ನು ಬರೆದಿದ್ದಾರೆ.  	
	
			(ಎಮ್.ಎಸ್.ಕೆ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ